ಅಮರಾವತಿ
	ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಸತ್ತೇನಪಲ್ಲಿ ತಾಲೂಕಿಗೆ ಸೇರಿದಂತೆ ಕೃಷ್ಣಾ ನದಿಯ ದಂಡೆಯ ಮೇಲಿದೆ. ಧಾನ್ಯಕಟಕವೆಂಬುದು ಇದರ ಹಳೆಯ ಹೆಸರು. ಹಿಂದೆ ಇದು ಶಾತವಾಹನರ ರಾಜಧಾನಿಯಾಗಿತ್ತು. ಹತ್ತನೆಯ ಶತಮಾನದ ಸುಮಾರಿಗೇ ಇಲ್ಲಿನ ಅಮರೇಶ್ವರ ದೇವಾಲಯ ಪ್ರಸಿದ್ಧವಾಗಿತ್ತು. ಇಲ್ಲಿ ನಡೆಯುವ ಶಿವರಾತ್ರಿ ಉತ್ಸವ ತುಂಬ ವೈಭವಪೂರಿತವಾಗಿರುತ್ತದೆ. ಬೌದ್ಧಸ್ತೂಪದ ಕಲಾಕುಶಲತೆ ಈ ಸ್ಥಳ ಪ್ರಶಸ್ತಿಗೆ ಕಾರಣವಾಗಿದೆ. ಕ್ರಿಸ್ತಪೂರ್ವ ಕೆಲವು ದಶಕಗಳಲ್ಲೇ ಆರಂಭವಾಗಿ ಕ್ರಿಸ್ತಾಬ್ದ ನಾಲ್ಕನೆಯ ಶತಮಾನದವರೆಗೂ ಇಲ್ಲಿನ ವಿಹಾರಗಳ ಸ್ತೂಪದ ನಿರ್ಮಾಣ ನಡೆಯಿತು. ಆಂಧ್ರ ಶಾತವಾಹನರಾಜರು ಮಹಾಯಾನ ಬೌದ್ಧಧರ್ಮವನ್ನು ಪ್ರೋತ್ಸಾಹಿಸಿ ಇಲ್ಲಿ ಚೈತ್ಯಗಳನ್ನೂ, ವಿಹಾರಗಳನ್ನೂ, ಸ್ತೂಪಗಳನ್ನೂ ಕಟ್ಟಿಸಿದರು. ಇಲ್ಲಿನ ಸ್ತೂಪಶಿಲ್ಪಗಳು ಜಗದ್ವಿಖ್ಯಾತವಾಗಿವೆ; ಬುದ್ಧನ ಜಾತಕಕಥೆಗಳಿಂದಲೂ ಜೀವಿತೆ ವೃತ್ತಾಂತಗಳಿಂದಲೂ ವಿವರಗಳನ್ನು ಆಯ್ದುಕೊಂಡು ಶಿಲ್ಪಿಗಳು ಇಲ್ಲಿ ರಮಣೀಯವಾದ ಶಿಲ್ಪಗಳನ್ನು ಕಡೆದಿದ್ದಾರೆ.		
(ಎಸ್.ಕೆ.ಆರ್.)

	ಕರ್ನಲ್ ಮೆಕೆನ್ಜಿ ಅಮರಾವತಿ ವಾಸ್ತುಶಿಲ್ಪವನ್ನು ಬೆಳಕಿಗೆ ತಂದ (1798). ಇದು ಭಾರತಿಯ ವಾಸ್ತುಶಿಲ್ಪ ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯವನ್ನೇ ಆರಂಭಿಸಿತು. ಶಿಲ್ಪ ಕಲಾಕೃತಿ ಬಹುಭಾಗ ಈಗ ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂನಲ್ಲಿದೆ.
	
ಅಮರಾವತಿಯಲ್ಲಿ ವಾಸ್ತು ಮತ್ತು ಶಿಲ್ಪಕ್ಕೆ ಭೇದವನ್ನು ಕಲ್ಪಿಸುವುದು ಬಹು ಕಷ್ಟ. ಇಲ್ಲಿಯ ಮುಖ್ಯಕೃತಿಯೆಂದರೆ ಮಹಾಸ್ತೂಪ. ಇಲ್ಲಿನ ಸ್ತೂಪಗಳು ಸಾಂಚಿ ಮತ್ತು ಬಾರ್ಹುತ್‍ನಲ್ಲಿರುವ ಸ್ತೂಪಗಳಿಗಿಂತ ಕೆಲವು ವಿಷಯಗಳಲ್ಲಿ ಭಿನ್ನವಾಗಿದ್ದು, ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಅಮರಾವತಿಸ್ತೂಪ ಕ್ರಿ.ಪೂ. ಒಂದನೆಯ ಶತಮಾನದಿಂದ ಕ್ರಿ.ಶ. ಮೂರನೆಯ ಶತಮಾನದವರೆಗೆ ನಾಲ್ಕು ಹಂತಗಳಲ್ಲಿ ಬೆಳೆಯಿತೆಂದು ಹೇಳಬಹುದು. ಈ ಸ್ತೂಪ ಈ ಶತಮಾನಕ್ಕೆ ಸಾಮಾನ್ಯವಾದ ಅಲಂಕಾರದಿಂದ ಭೂಷಿತವಾಗಿ ಭಾರತದ ಅತ್ಯುತ್ತಮ ಸ್ತೂಪಗಳಲ್ಲಿ ಒಂದೆನಿಸಿಕೊಂಡಿತ್ತು. ನಶಿಸಿಹೋಗಿದ್ದರೂ ಅದರ ಭವ್ಯತೆಯನ್ನು ಈಗಲೂ ಊಹಿಸಬಹುದು. ಅದರ ವ್ಯಾಸ 162', ಎತ್ತರ ಸುಮಾರು 120'. ಈ ಬೃಹತ್ ಸ್ತೂವ ಬಿಳಿಯ ಶಿಲೆಯ ಶಿಲ್ಪಫಲಕಗಳಿಂದ ಅಚ್ಛಾದಿತವಾಗಿತ್ತು. ನಾಲ್ಕು ದಿಕ್ಕುಗಳಲ್ಲೂ ಐದು ಆಯಕ ಸ್ತಂಭಗಳಿದ್ದುವು. ಅಂಡದ ಮೇಲೆ ಚೌಕವಾದ ಹರ್ಮಿಕೆಯೂ ಅದರ ಮೇಲೆ ಛತ್ರಿಯೂ ಇದ್ದುವು.

	ಈ ಸ್ತೂಪವನ್ನು ಅಲಂಕರಿಸಲು ನಿರ್ಮಾಣವಾದ ಬಿಳಿಯ ಕಲ್ಲಿನ ಶಿಲ್ಪಫಲಕಗಳೇ ಪ್ರಾಚೀನ ಆಂಧ್ರಕಲಾಕಾರರ ಮಹಾಕೃತಿಗಳು. ಈ ಶಿಲ್ಪಫಲಕಗಳಲ್ಲಿ ಜಾತಕ ಮತ್ತು ಅವದಾನದ ಕಥೆಗಳು ಮತ್ತು ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಕೆತ್ತಲ್ಪಟ್ಟಿವೆ. ಇಲ್ಲಿ ದೊರಕಿರುವಷ್ಟು ಜಾತಕ ಕಥಾಶಿಲ್ಪಗಳು ಮತ್ತೆಲ್ಲೂ ದೊರಕಿಲ್ಲವೆಂದೇ ಹೇಳಬಹುದು. ಇವುಗಳಲ್ಲಿ ಷಡ್ದಂತ, ಹಂಸ, ವಿಧುರಪಂಡಿತ, ಮಾಂಧಾತ ಮುಂತಾದ ಜಾತಕಗಳು ಗಮನಾರ್ಹವಾದುವು. ಇಲ್ಲಿನ ಶಿಲ್ಪಿಗಳು ಸ್ತ್ರೀಸೌಂದರ್ಯವನ್ನು ನಯನಮನೋಹರವಾಗಿ ತೋರಿಸಿದ್ದಾರೆ, ನಾಲ್ಕು ಸ್ತ್ರೀಯರು ಬುದ್ಧಪಾದವನ್ನು ಪೂಜಿಸುತ್ತಿರುವ ಶಿಲ್ಪಫಲಕದಲ್ಲಿ ಸುಂದರ ಸ್ತ್ರೀಯರ ನಯವಾದ ಮತ್ತು ಸಹಜವಾದ ಅಂಗವಿನ್ಯಾಸಗಳು ಬಹು ಚೆನ್ನಾಗಿ ರೂಪುಗೊಂಡಿವೆ. ಇಲ್ಲಿ ಸ್ತ್ರೀಯರ ಅಂಗಸೌಷ್ಠವ ಗಮನಾರ್ಹವಾದರೂ ಶೃಂಗಾರಕ್ಕೆಡೆಗೊಡುವಂತಿಲ್ಲ. ಅವರೆಲ್ಲರೂ ಬೌದ್ಧಧರ್ಮದಿಂದ ಚೇತನಗೊಂಡ ವ್ಯಕ್ತಿಗಳಾಗಿ ಕಂಗೊಳಿಸುತ್ತಿದ್ದಾರೆ. ಪ್ರಾಣಿಶಿಲ್ಪಗಳು ಸಹಜವಾಗಿ ಬಂದಿರುವುದು ಈ ಶಿಲ್ಪದ ಮತ್ತೊಂದು ವೈಶಿಷ್ಟ್ಯ. ನಳಗಿರಿ ಎಂಬ ಆನೆ ಕೋಪಾವಿಷ್ಪವಾಗಿ ಜನರಲ್ಲಿ ಭೀತಿಯನ್ನುಂಟುಮಾಡಿ, ಬುದ್ಧನ ದರ್ಶನವಾದಕೂಡಲೇ ಸೌಮ್ಯವಾಗಿ, ಬುದ್ಧನ ಪಾದದಡಿಯಲ್ಲಿ ಮುದುರಿಕೊಂಡು ನಿಂತಿರುವುದು ಒಂದು ಮಹಾಕೃತಿ.

	ಅಮರಾವತಿಯಲ್ಲಿ ಮೊದಲು ಹೀನಯಾನಧನರ್ಮದ ಪ್ರಕಾರ ಬುದ್ಧನ ಪಾದ, ಬೋಧಿವೃಕ್ಷ, ಸಿಂಹಾಸನ ಮುಂತಾದ ಸಂಕೇತಗಳೇ ಬುದ್ಧನನ್ನು ಸೂಚಿಸುತ್ತಿದ್ದುವು. ಕ್ರಿ.ಶ. ಎರಡನೆಯ ಶತಮಾನದ ಅನಂತರ ಗಾಂಧಾರ ಮತ್ತು ಮಥುರಾಶಿಲ್ಪಗಳಿಂದ ಪ್ರಭಾವಿತಗೊಂಡು ಅಮರಾವತಿಯಲ್ಲೂ, ಬುದ್ಧ ವಿಗ್ರಹಗಳು ನಿರ್ಮಾಣವಾದುವು. ಸಾಂಪ್ರದಾಯಿಕವಾದ ಮತ್ತು ಮಹಾಪುರುಷಲಕ್ಷಣಗಳನ್ನೊಳಗೊಂಡ ಬುದ್ಧ ವಿಗ್ರಹಗಳು ಅಮರಾವತಿಯ ಶಿಲ್ಪಗಳಿಂದಲೇ ಸ್ಪಷ್ಟಗೊಳಿಸಲ್ಪಟ್ಟವೆಂದು ಕೆಲವು ವಿದ್ವಾಂಸರ ಅಭಿಪ್ರಾಯ.

	ಅಮರಾವತಿಯ ಸಮೀಪದಲ್ಲಿರುವ ಘಂಟಸಾಲ, ಗೋಲಿ, ಭಟ್ರಿಪ್ರೋಲು, ಜಗ್ಗಯ್ಯಪೇಟ, ಗುಡಿವಾಡ, ನಾಗಾರ್ಜುನಕೊಂಡ ಮುಂತಾದ ಕಡೆಗಳಲ್ಲಿರುವ ಶಿಲ್ಪಗಳು ಅಮರಾವತಿಯ ಮಾದರಿಯಲ್ಲೇ ಇರುವುದರಿಂದ ಇವೆಲ್ಲವೂ ಆ ಶಿಲ್ಪಶೈಲಿಗೆ ಸೇರಿದುವೆಂದು ಹೇಳಬಹುದು. ಇಷ್ಟೇ ಅಲ್ಲದೆ, ಅಮರಾವತಿ ಶಿಲ್ಪಗಳು, ಭಾರತದ ಗಡಿಯನ್ನು ದಾಟಿ, ಆಗ್ನೇಯ ಏಷ್ಯದ ರಾಜ್ಯಗಳಲ್ಲೂ ದೊರಕಿವೆ. ಚಂಪಾರಾಜ್ಯದ ಡಾಂಗ್ ಡುವಾಂಗ್ ಸುಮಾತ್ರದ್ವೀಪದ ಪ್ಯಾಲೆಂಬಂಗ್ ಮತ್ತು ಸೆಲಿಬೆಸನ್ ಸೆಂಪಗ ಎಂಬ ಸ್ಥಳಗಳಲ್ಲಿ ಅಮರಾವತಿ ಶಿಲ್ಪಶೈಲಿಗೆ ಸೇರಿದ ಬುದ್ಧವಿಗ್ರಹಗಳು ದೊರಕಿವೆ. ಇವು ಅಮರಾವತಿಯ ಶಿಲ್ಪದ ಪ್ರಾಮುಖ್ಯ ಮತ್ತು ಜನಾನುರಾಗದ ಕುರುಹುಗಳು.							
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ